ಫಾ - ಹಿಯೆನ್ 
 	ಚೀನದ ಬೌದ್ಧ ಸಂನ್ಯಾಸಿ, ಯಾತ್ರಿಕ, ಲೇಖಕ. ಷಾನ್ಸಿಯಲ್ಲಿ ಜನಿಸಿದ. ಚಾಂಗ್ ಆನ್‍ನಲ್ಲಿ (ಆಧುನಿಕ ಷೀಯಾನ್) ಬೌದ್ಧಧರ್ಮವನ್ನು ಕುರಿತು ಅಧ್ಯಯನ ಮಾಡಿದ. ಇವನ ಹಿಂದಿನ ಹೆಸರು ಕುಂಗ್ ಎಂಬುದಾಗಿತ್ತು. ಎಳೆಯ ವಯಸ್ಸಿನಲ್ಲೇ ಈತನನ್ನು ಬೌದ್ಧಸಂನ್ಯಾಸಿ ಮಠದಲ್ಲಿ ಶಿಷ್ಯತ್ವಕ್ಕೆ ಸೇರಿಸಿಕೊಂಡು ಫಾ-ಹಿಯನ್, ಧರ್ಮಪ್ರಕಾಶ ಎಂಬ ಆಶ್ರಮನಾಮವನ್ನು ಕೊಡಲಾಯಿತು. 399ರಲ್ಲಿ ಇವನ ಚಾಂಗ್ ಆನ್‍ನಿಂದ ಯಾತ್ರೆಗಾಗಿ ಹೊರಟಾಗ ಈತನಿಗಾಗಲೇ 65 ವರ್ಷ ವಯಸ್ಸಾಗಿತ್ತು. 413ರಲ್ಲಿ ಇವನು ಚಿಯೆಂಗ್‍ಕಾಂಗ್ ತಲುಪಿದ. ಹಿಂದಿರುಗಿದ ಒಂದು ವರ್ಷದ ಬಳಿಕ ತನ್ನ ಪ್ರವಾಸಕಥನವನ್ನು ಬರೆದಿಟ್ಟ.

	ಒಂಬತ್ತೋ ಹತ್ತೋ ಭಿಕ್ಷುಗಳೊಡನೆ ಈತ ಹೊರಟಿದ್ದ, ಮರಳುಗಾಡುಗಳನ್ನೂ ಪಾಮಿರ್ ಪ್ರಸ್ಥಭೂಮಿಯನ್ನೂ ಹಾದು ಉತ್ತರ, ಮಧ್ಯ ಮತ್ತು ಪೂರ್ವ ಭಾರತದಲ್ಲೆಲ್ಲ ಸಂಚರಿಸಿ ದಖನ್ನಿನವರೆಗೂ ಬಂದು, ಸಿಂಹಳ ಮತ್ತು ಸುಮಾತ್ರಗಳ ಮೂಲಕ ಹಿಂದೂ ಸಾಗರ ಮತ್ತು ಚೀನ ಸಮುದ್ರವನ್ನು ದಾಟಿ, ಸುಮಾರು ಹದಿನೈದು ವರ್ಷಗಳ ವೈಶಿಷ್ಟ್ಯಪೂರ್ಣ ವಿದೇಶಪ್ರವಾಸವನ್ನು ಮುಗಿಸಿ ಚೀನದ ಲಾವೋಶಾನ್ ಬಂದರಿನಲ್ಲಿ ಬಂದಿಳಿದ. ಜೊತೆಗಾರರಲ್ಲಿ ಕೆಲವರು ಹಿಂದೆಯೇ ಯಾತ್ರೆಯಿಂದ; ಹಿಮ್ಮೆಟ್ಟಿದ್ದರು; ಕೆಲವರು ಕಾಲವಶರಾಗಿದ್ದರು; ಕೆಲವರು ಭಾರತದಲ್ಲೇ ಉಳಿದುಕೊಂಡಿದ್ದರು. ತಾನು ಕೈಗೊಂಡಿದ್ದ ಕೆಲಸವನ್ನು-ಎಂದರೆ ಬೌದ್ಧ ಧರ್ಮದ ತವರಿನಿಂದ ಪವಿತ್ರ ಬೌದ್ಧಧರ್ಮಗ್ರಂಥಗಳನ್ನು, ಮುಖ್ಯವಾಗಿ ವಿನಯ ಪಿಟಕದ ನಿಜಪ್ರತಿಯನ್ನು, ತೆಗೆದುಕೊಂಡು ಬರಬೇಕೆಂಬ ಧ್ಯೇಯವನ್ನು ಸಾಧಿಸಲು ಫಾ-ಹಿಯೆನ್ ದೃಢನಿಶ್ಚಯ ತಳೆದಿದ್ದ.

	ಫಾ-ಹಿಯೆನ್ ಚಾಂಗ್ ಆನ್‍ನಿಂದ ತನ್ನ ಪ್ರವಾಸವನ್ನು ಪ್ರಾರಂಭಿಸಿದ. ಮಧ್ಯ ರಾಜ್ಯವನ್ನು (ಉತ್ತರ ಭಾರತ) ತಲುಪಲು ಅವನಿಗೆ ಆರು ವರ್ಷಗಳು ಹಿಡಿದುವು. ಅಲ್ಲೇ ಅವನು ಆರು ವರ್ಷಗಳನ್ನು ಕಳೆದ. ಚಿಂಗ್‍ಚೋವನ್ನು ತಲುಪುವುದಕ್ಕೆ ಮೊದಲು ಮರುಪ್ರಯಾಣದಲ್ಲಿ ಮೂರು ವರ್ಷಗಳನ್ನು ಕಳೆದ. ಪಶ್ಚಿಮದ ಮರುಭೂಮಿಯಿಂದ ಹಿಡಿದು ಭಾರತದ ಭೂಭಾಗದವರೆಗಿನ ಸುಮಾರು ಮೂವತ್ತು ರಾಷ್ಟ್ರಗಳಲ್ಲಿ ಆತ ಸಂಚರಿಸಿದ. ಪ್ರವಾಸಕಾಲದಲ್ಲಿ ಆದ ಭೇಟಿಮಾಡಿದ ಭಿಕ್ಷುಗಳ ಸದಾಚಾರ ಮತ್ತು ಧಾರ್ಮಿಕಬೋಧನೆಗಳನ್ನು ಕುರಿತ ವಿಚಾರಗಳನ್ನು ಚೀನದಲ್ಲಿದ್ದ ಭಿಕ್ಷುಗಳಿಗೆ ತಿಳಿಸುವುದಕ್ಕಾಗೇ ಆದ ತನ್ನ ಪ್ರಾಣವನ್ನು ಪಣವಾಗಿ ಒಡ್ಡಿ ಅನೇಕ ಕಷ್ಟಸಂಕಟಗಳನ್ನೂ ಅಪಾಯಗಳನ್ನೂ ಎದುರಿಸಿ ತಾಯ್ನಾಡಿಗೆ ಹಿಂದಿರುಗಿದ. ಶ್ರದ್ಧೆಯುಳ್ಳವರು ತನ್ನ ಅನುಭವಗಳನ್ನು ಹಂಚಿಕೊಳ್ಳಲೆಂಬ ಉದ್ದೇಶದಿಂದ ಬಿದಿರು ಮತ್ತು ರೇಷ್ಮೆಯ ವಸ್ತ್ರದ ಮೇಲೆ ಆದ ತನ್ನ ಪ್ರವಾಸದ ರೂಪರೇಷೆಗಳನ್ನು ಚಿತ್ರಿಸಿದ್ದಾನೆ. ಹೀಗೆಂದು ಆತ ತನ್ನ ದಾಖಲೆಯ ಉಪಸಂಹಾರದಲ್ಲಿ ನುಡಿದಿದ್ದಾನೆ.

	ಚೀನಕ್ಕೆ ಹಿಂದಿರುಗಿದ ಮೇಲೆ ಬೌದ್ಧ ಅನಫ್ರ್ಯ ಕೃತಿಗಳನ್ನು ಶೀಘ್ರವಾಗಿ ಭಾಷಾಂತರಿಸಬೇಕೆಂಬ ಧ್ಯೇಯ ಅವನಿಗೆ ಎಷ್ಟು ಪ್ರಬಲವಾಗಿತ್ತೆಂದರೆ, ಆತ ಮೊದಲು ಯೋಚಿಸಿದ್ದಂತೆ ಜಾಂಗ ಆನಿನ ವಿಹಾರಕ್ಕೆ ಹೋಗಿ ಸೇರಿಕೊಳ್ಳುವುದಕ್ಕೆ ಬದಲಾಗಿ ಚಿಯೆಂಗ್‍ಕಾಂಗ್‍ಗೆ (ನ್ಯಾನ್‍ಕಿಂಗ್) ಹೋಗಿ, ಬುದ್ಧಭದ್ರನೆಂಬ ಭಾರತೀಯ ಭಿಕ್ಷುವೊಬ್ಬನ ನೆರವಿನಿಂದ ಆ ಸೂತ್ರಗಳನ್ನು ಭಾಷಾಂತರಿಸಿದ.

	ಗುಪ್ತವಂಶದ ಸಮ್ರಾಟ ವಿಕ್ರಮಾದಿತ್ಯನ ಆಡಳಿತದ ಅವಧಿಯಲ್ಲಿ ಫಾ-ಹಿಯೆನ್ ಭಾರತಕ್ಕೆ ಬಂದಿದ್ದ. ಭಾರತೀಯ ಇತಿಹಾಸದ ಆ ಸಮೃದ್ಧ ಅವಧಿಯ ಐತಿಹಾಸಿಕ ಅವಶೇಷಗಳನ್ನು-ಉದಾಹರಣೆಗೆ ಶಿಲ್ಪಗಳು, ನಾಣ್ಯಗಳು ಇತ್ಯಾದಿ-ಬಿಟ್ಟರೆ ಆ ಯುಗದ ಐತಿಹಾಸಿಕ ಸಾಕ್ಷ್ಯಗಳಲ್ಲಿ ಅತ್ಯಂತ ಮಹತ್ತ್ವಪೂರ್ಣವಾದ್ದೆ ಆದರೆ ಬಹುಶಃ ಫಾ-ಹಿಯೆನ್ನನ ದಾಖಲೆಯೇ. ಅಶೋಕ ಶಾಸನದ ಅದ್ಭುತವಾದ ಏಕಶಿಲಾ ಸ್ತಂಭಗಳು, ಬೌದ್ಧಸ್ತೂಪಗಳು, ದೇವಾಲಯಗಳು, ವಿಹಾರಗಳು ಮತ್ತಿತರ ಸ್ಮಾರಕಗಳು-ಇವುಗಳ ಬಗ್ಗೆ ಆತನ ವಿವರಣೆ ಈ ಅವಧಿಯನ್ನು ಕುರಿತ ಸಂಶೋಧನೆಗಳಿಗೆ ಅತ್ಯಂತ ಉಪಯುಕ್ತ ಸಾಮಾಗ್ರಿಯನ್ನು ಒದಗಿಸುತ್ತದೆ. ಚಾಂಗ್ ಆನ್‍ನಿಂದ ಹೊರಟ ಫಾ-ಹಿಯೆನ್, ಬೃಹತ್‍ಗೋಡೆಯ ಬದಿಗಿರುವ ತುನ್‍ಹುವಾಂಗ್ ಮೂಲಕವೂ ಗೋಬಿ ಮರುಭೂಮಿ ಹಾಗೂ ಏಷ್ಯದ ವಿವಿಧ ರಾಷ್ಟ್ರಗಳ ಮತ್ತು ಗಾಂಧಾರದ ಮೂಲಕವೂ ಹಾಯ್ದು ಪಂಜಾಬಿನ ಮುಖಾಂತರ ಭಾರತವನ್ನು ಪ್ರವೇಶಿಸಿದ.

	ಗೋಬಿ ಮರುಭೂಮಿಯ ಬಗ್ಗೆ ಆದ ಹೀಗೆ ಬರೆದಿದ್ದಾನೆ: ಇಲ್ಲಿಯ ದುಷ್ಟಶಕ್ತಿಗಳು ಮತ್ತು ಉಷ್ಣಮಾರುತಗಳು ಎದುರಾಗುವ ಪ್ರತಿಯೊಬ್ಬ ವ್ಯಕ್ತಿಯನ್ನೂ ಕೊಲ್ಲುತ್ತವೆ. ಇಲ್ಲಿ ಹಕ್ಕಿಗಳ ಹಾರಾಟವಿಲ್ಲ; ಮೃಗಗಳ ಅಲೆದಾಟವಿಲ್ಲ. ಕಣ್ಣು ಎಷ್ಟು ದೂರ ಹಾಯಬಹುದೊ ಅಷ್ಟು ದೂರ ಮರುಭೂಮಿಯಲ್ಲಿ ಎಲ್ಲೂ ಯಾವ ರಸ್ತೆಯೂ ಕಾಣಬರುವುದಿಲ್ಲ. ಹಾದಿಯಲ್ಲೇ ಕೊನೆಯಸಿರೆಳೆದವರ ಅಸ್ಥಿಪಂಜರಗಳೇ ಹಾದಿಯನ್ನು ತೋರಲು ನೆರವಾಗುತ್ತವೆ ಎಂದು ಹೇಳಿದ್ದಾನೆ. ಅಸ್ಥಿಪಂಜರಗಳೇ ಹಾದಿಯನ್ನು ತೋರಲು ನೆರವಾಗುತ್ತವೆ ಎಂದು ಹೇಳಿದ್ದಾನೆ. ಮಧ್ಯ ಏಷ್ಯದ ರಾಷ್ಟ್ರಗಳ ಮೂಲಕ ಹಾದುಹೋಗುವಾಗ ಅಲ್ಲಿಯ ನಿವಾಸಿಗಳು ಮತ್ತು ರಾಜರು ಭಾರತದ ಬೌದ್ಧಧರ್ಮವನ್ನು ಅನುಸರಿಸುತ್ತಿದ್ದುದನ್ನು ಆದ ಕಂಡುಕೊಂಡ. ಅವನು ಖೋತಾನ್ ಎಂಬಲ್ಲಿಗೆ ಬಂದಾಗ, ರಾಜ-ಅತಿಥಿಯಂತೆ ಆದನನ್ನು ಗೋಮತೀ ವಿಹಾರದಲ್ಲಿ ಇಳಿಸಲಾಯಿತು. ಇದರ ಬಗ್ಗೆ ಆದ ಹೀಗೆ ಹೇಳಿದ್ದಾನೆ: ಇಲ್ಲಿ 3,000 ಭಿಕ್ಷುಗಳು ಒಟ್ಟಾಗಿ ವಾಸಮಾಡುತ್ತಿದ್ದಾರೆ. ಗಂಟೆಯ ಸದ್ದು ಕೇಳಿದ ಕೊಡಲೇ ಎಲ್ಲರೂ ಊಟಕ್ಕೆ ಹಾಜರಾಗುತ್ತಾರೆ. ಭೋಜನ ಶಾಲೆಯನ್ನು ಪ್ರವೇಶಿಸಿದಾಗ ಅತ್ಯಂತ ಉಚಿತವಾದ ರೀತಿಯಲ್ಲಿ ನಡೆದುಕೊಳ್ಳುತ್ತಾರೆ; ಕ್ರಮಪರಂಪರೆಗನುಗುಣವಾಗಿ ತಮ್ಮ ತಮ್ಮ ಸ್ಥಾನಗಳನ್ನು ಅಲಂಕರಿಸುತ್ತಾರೆ. ಎಲ್ಲವೂ ಶಾಂತವಾಗಿರುತ್ತದೆ; ಭಿಕ್ಷಾಪಾತ್ರೆಗಳ ಸದ್ದು ಕೂಡ ಕೇಳಿಸುವುದಿಲ್ಲ. ಹೆಚ್ಚು ಆಹಾರವನ್ನು ಬಡಿಸಲು ಅವರು ಅಡಿಗೆಯವರನ್ನು ಕೂಗಿ ಕರೆಯುವುದಿಲ್ಲ. ತಮ್ಮ ಕೈಬೆರಳುಗಳಿಂದ ಸೂಚನೆ ಕೊಡುತ್ತಾರೆ. ಬುದ್ಧನ ಪ್ರತಿಮೆಗಳ ಮೆರವಣಿಗೆಯ ಹದಿನಾಲ್ಕು ದಿವಸಗಳ ಉತ್ಸವದ ಬಗ್ಗೆ ಆದ ಬರೆದಿರುವುದು ಈ ರೀತಿ: ಪ್ರತಿಮೆಗಳು ನಗರದ್ವಾರದಿಂದ ಸುಮಾರು 100 ಹೆಜ್ಜೆಗಳಷ್ಟು ದೂರದಲ್ಲಿ ಬಂದಾಗ, ರಾಜ ತನ್ನ ಕಿರೀಟವನ್ನು ತೆಗೆದಿರಿಸಿ ಹೊಸಬಟ್ಟೆಗಳನ್ನು ಹಾಕಿಕೊಳ್ಳುತ್ತಾನೆ. ಇಕ್ಕೆಲಗಳಲ್ಲೂ ಪರಿವಾರದವರಿಂದ ಕೂಡಿದವನಾಗಿ ಹೂವುಗಳನ್ನೂ ಸುಗಂಧ ದ್ರವ್ಯಗಳನ್ನೂ ಕೈಯಲ್ಲಿ ಹಿಡಿದುಕೊಂಡು ಬರಿಗಾಲಲ್ಲಿ ನಡೆದುಕೊಂಡು ಬಾಗಿಲನ್ನು ದಾಟಿ ಹೊರಬರುತ್ತಾನೆ. ಪ್ರತಿಮೆಗಳನ್ನು ಸಮೀಪಿಸಿದಾಗ ನೆಲಮುಟ್ಟಿ ನಮಸ್ಕರಿಸುತ್ತಾನೆ.

	ಆದರೆ ಫಾ-ಹಿಯೆನ್ ವರ್ಣಿಸಿರುವ ಖೋತಾನ್ ಇಂದು ಉಳಿದಿಲ್ಲ. ವಿದೇಶಿಯರ ಆಕ್ರಮಣದಿಂದಾಗಿ ಭಾರತದ ಅತ್ಯಮೂಲ್ಯ ಕಾಣಿಕೆಯಾಗಿದ್ದ ಖೋತಾನ್ ಭಯಂಕರವಾದ ಗೋಬಿ ಮರುಭೂಮಿಯ ಒಂದು ಭಾಗವಾಗಿ ಪರಿಣಮಿಸಿದೆ.   

ಫಾ-ಹಿಯೆನ್ ಭಾರತಕ್ಕೆ ಬರುವ ಹಾದಿಯಲ್ಲಿ ಖಾಲ್ಚಾದಲ್ಲಿ ಪಂಚಪರಿಷತ್ತನ್ನು ನೋಡಿದ. ಇದು ಐದು ವರ್ಷಗಳಿಗೊಮ್ಮೆ ನಡೆಯುತ್ತಿದ್ದ ಮೇಳ. ಇದರಲ್ಲಿ ನಾಲ್ಕೂ ದಿಕ್ಕುಗಳಿಂದ ಬಂದು ಸೇರುತ್ತಿದ್ದ ಪವಿತ್ರ ಭಿಕ್ಷುಗಳಿಗೆ ರಾಜ ಮಹೋಪಕಾರಗಳನ್ನು (ದಾನ) ಸಲ್ಲಿಸುತ್ತಿದ್ದ. ಫಾ-ಹಿಯೆನ್ ನೇಣು ಹಗ್ಗದ ಸೇತುವೆಯ ಮೂಲಕ ಸಿಂಧೂನದಿಯನ್ನು ದಾಟಿ-ಉದ್ಯಾನ, ಗಾಂಧಾರ ಮತ್ತು ತಕ್ಷಶಿಲೆಗಳಿಗೆ ಭೇಟಿಕೊಟ್ಟು ಅಲ್ಲಿಂದ ಮುಂದೆ ಪೆಷಾವರಕ್ಕೆ ತೆರಳಿ ಅಲ್ಲಿ ಕನಿಷ್ಕನ ಮಹಾಸ್ತೂಪವನ್ನು ನೋಡಿದ. ಯಾತ್ರಿಕರು ಅದುವರೆಗೆ ನೋಡಿದ ಸ್ತೂಪ ಮತ್ತು ದೇವಾಲಯಗಳಲ್ಲಿ ಯಾವುದೂ ವೈಭವದಲ್ಲಾಗಲಿ, ಗಾಂಭೀರ್ಯದಲ್ಲಾಗಲೀ ಇದಕ್ಕೆ ಹೆಗಲೆಣೆಯಾಗಿ ನಿಲ್ಲಲಾರದು ಎಂದು ಇದರ ಬಗ್ಗೆ ಆತ ಹೇಳಿದ್ದಾನೆ. ಅವನು ನಗರಹರಕ್ಕೂ (ಇಂದಿನ ಹದ್ದಾ) ಭೇಟಿ ಕೊಟ್ಟು, ಅಲ್ಲಿಯ ದೇವಾಯತನವೊಂದರಲ್ಲಿ ಬುದ್ಧನ ಅವಶೇಷಗಳನ್ನು ನೋಡಿದ. ಪ್ರತಿದಿನವೂ ರಾಜ ಕಾಣಿಕೆಯನ್ನೊಪ್ಪಿಸಿ ಆ ಅವಶೇಷಗಳನ್ನು ಪೂಜಿಸುತ್ತಿದ್ದ. ಆ ನಗರದ ದಕ್ಷಿಣಕ್ಕೆ ಅರ್ಧ ಯೋಜನದಷ್ಟು ದೂರದಲ್ಲಿ ಪ್ರಸಿದ್ಧ ಗುಹೆಯೊಂದಿದೆ. ಅದರಲ್ಲಿ ಬುದ್ಧ ತನ್ನ ಛಾಯೆಯನ್ನು ಬಿಟ್ಟಿದ್ದಾನೆಂದು ಹೇಳಿದೆ. ವಿವಿಧ ರಾಜ್ಯಗಳ ರಾಜರು ತಮ್ಮ ನಾಡಿನ ಕುಶಲ ಶಿಲ್ಪಿಗಳನ್ನು ಅಲ್ಲಿಗೆ ಕಳುಹಿಸಿದ್ದಾರೆ. ಆದರೆ ಯಾರೊಬ್ಬರಿಂದಲೂ ಆ ಬಗೆಯ ನಿರ್ಮಾಣ ಸಾಧ್ಯವಾಗಿಲ್ಲ. ಸುಮಾರು ಹತ್ತು ಹೆಜ್ಜೆಗಳಷ್ಟು ದೂರದಲ್ಲಿ ನಿಂತಾಗ ಈ ಛಾಯೆ ಚಿನ್ನದ ಪರಿವೇಶದಿಂದಲೂ ಉಜ್ಜ್ವಲ ಕಾಂತಿಯಿಂದಲೂ ಬೆಳಗಿ ನಿಜವಾದ ಬುದ್ಧನಂತೆಯೇ ತೋರುತ್ತದೆ. ಹತ್ತಿರ ಹತ್ತಿರ ಹೋದಂತೆಲ್ಲ ಅದು ಅಸ್ಪಷ್ಟವಾಗುತ್ತ ಬಂದು ಕೊನೆಗೆ ಅದು ಕದಡಿದ ಅಥವಾ ಅಸ್ಪಷ್ಟ ಹೋಲಿಕೆ ಮಾತ್ರವಾಗಿ ಪರಿಣಮಿಸುತ್ತದೆ. ಹೀಗೆಂದು ಆ ಛಾಯೆಯನ್ನು ಆತ ವರ್ಣಿಸಿದ್ದಾನೆ.

	ಅವನ ಪಂಜಾಬಿನ ಮೂಲಕ ಪೂರ್ವದಿಕ್ಕಿನತ್ತ ಪ್ರಯಾಣಮಾಡಿ ಮಥುರಾವನ್ನು ತಲುಪಿದ. ಇದು ಗುಪ್ತ ಸಾಮ್ರಾಜ್ಯದ ಹೃದಯಸ್ಥಾನದಲ್ಲಿದ್ದು, ಪ್ರವರ್ಧಮಾನವಾದ ಬೌದ್ಧ ಕೇಂದ್ರವಾಗಿತ್ತು. ಈ ಸ್ಥಳಗಳ ಬಗ್ಗೆ ಆತ ಈ ರೀತಿ ಹೇಳಿದ್ದಾನೆ; ಇಲ್ಲಿ ಹಿಮಪಾತವಿಲ್ಲದ ಸಮಶೀತೋಷ್ಣ ವಾಯುಗುಣವಿದೆ. ಸರ್ಕಾರಿ ನಿರ್ಬಂಧಗಳಾವುವೂ ಇಲ್ಲದೆ ಜನರು ಸುಖಸಮೃದ್ಧಿಗಳನ್ನು ಕಂಡಿದ್ದಾರೆ. ರಾಜನ ಭೂಮಿಯಲ್ಲಿ ಬೇಸಾಯ ಮಾಡುವ ವ್ಯಕ್ತಿಗಳು ಮಾತ್ರ ತಮ್ಮ ಲಾಭದ ಒಂದು ಭಾಗವನ್ನು ರಾಜನಿಗೆ ಸಂದಾಯ ಮಾಡಬೇಕು. ರಾಜ್ಯದ ಹೊರಗೆ ಹೋಗಬಯಸುವವರು ಹೋಗಬಹುದು; ಅಲ್ಲೇ ನಿಲ್ಲಬಯಸುವವರು ನಿಲ್ಲಬಹುದು. ರಾಜನ ಆಡಳಿತ ವ್ಯವಸ್ಥೆಯಲ್ಲಿ ದೇಹದಂಡನೆಗೆ ಎಡೆಯೇ ಇಲ್ಲ. ಅಪರಾಧದ ಉಗ್ರತೆಗನುಗುಣವಾಗಿ ಅಪರಾಧಿಗಳಿಗೆ ದಂಡವನ್ನು ಮಾತ್ರ ವಿಧಿಸಲಾಗುತ್ತದೆ. ರಾಜ್ಯಾದ್ಯಂತ ಯಾರೂ ಯಾವುದೇ ಜೀವಿಯನ್ನೂ ಕೊಲ್ಲುವುದಿಲ್ಲ. ಯಾರೂ ಮದ್ಯಪಾನ ಮಾಡುವುದಿಲ್ಲ. ಈ ನಾಡಿನಲ್ಲಿ ಹಂದಿಗಳನ್ನಾಗಲಿ, ಕೋಳಿಗಳನ್ನಾಗಲಿ ಸಾಕುವುದಿಲ್ಲ. ದನಕರುಗಳನ್ನು ಮಾರಾಟ ಮಾಡುವುದಿಲ್ಲ. ಮಾರುಕಟ್ಟೆಗಳ ಬಳಿ ಬಟ್ಟೆ ಕೇಂದ್ರಗಳಾಗಲಿ, ಕಟುಕರ ಅಂಗಡಿಗಳಾಗಲಿ ಇಲ್ಲ. ಮಗಧದ ಬಗ್ಗೆ ಹೆಚ್ಚಿನ ಸಂಖ್ಯೆ ನಗರಗಳೂ ಪಟ್ಟಣಗಳೂ ಇವೆ. ಇಲ್ಲಿಯ ಜನರು ಶ್ರೀಮಂತರೂ ಪ್ರವರ್ಧಮಾನರೂ ಆಗಿದ್ದಾರೆ. ಹೃದಯದ ಔದಾರ್ಯವನ್ನು ತೋರುವಲ್ಲಿ, ನೆರೆಹೊರೆಯವರ ಬಗ್ಗೆ ಕರ್ತವ್ಯದ ನಿರ್ವಹಣೆಯಲ್ಲಿ ಒಬ್ಬರು ಮತ್ತೊಬ್ಬರ ಆದರ್ಶವನ್ನು ಅನುಕರಿಸುತ್ತಾರೆ ಎಂದು ಅವನು ಹೇಳಿದ್ದಾನೆ. ಪಾಳಿ ಮತ್ತು ಸಂಸ್ಕøತವನ್ನು ಬರೆಯಲು, ಮಾತನಾಡಲು ಹಾಗೂ ಧರ್ಮ ಗ್ರಂಥಗಳ ಪ್ರತಿಗಳನ್ನು ತಯಾರಿಸಿಕೊಳ್ಳಲು ಮೂರು ವರ್ಷಗಳನ್ನು ವಿನಿಯೋಗಿಸಿದ ಮೇಲೆ, ಆತ ಒಂದೆಡೆಯಿಂದ ಮತ್ತೊಂದೆಡೆಗೆ ಪ್ರಯಾಣ ಮಾಡುತ್ತ ತಾಮ್ಲುಕ್ಕನ್ನು (ಇಂದಿನ ಪಶ್ಚಿಮ ಬಂಗಾಲ) ತಲುಪಿದ. ಅಲ್ಲಿಂದ ಬೃಹತ್ ವ್ಯಾಪಾರಿ ಹಡಗೊಂದರಲ್ಲಿ ಸಿಂಹಳಕ್ಕೆ ಪ್ರಯಾಣಮಾಡಿದ. ಸಿಂಹಳದಲ್ಲಿ ಎರಡು ವರ್ಷಗಳನ್ನು ಕಳೆದು ಜಾವಾದ ಮೂಲಕ ಸ್ವದೇಶಕ್ಕೆ ಹಿಂದಿರುಗಿದ.			(ಬಿ.ಟಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ